ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಸ್ವರೂಪ ಮತ್ತು ಮೌಲ್ಯ

ಲೇಖಕರು :
ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ
ಸೋಮವಾರ, ನವ೦ಬರ್ 4 , 2013

ಯಕ್ಷಗಾನವು ಯಾವ ಸ್ವರೂಪದ ಕಲೆ? ಜನಪದವೇ? ಅಥವಾ ಶಾಸ್ತ್ರೀಯವೇ? ಅದನ್ನು ಜಾನಪದವೆ೦ದರೆ ಶಾಸ್ತ್ರೀಯ, ಶಾಸ್ತ್ರೀಯವೆ೦ದರೆ ಜಾನಪದ ಎನ್ನುವ೦ತಹ ಸ್ಥಿತಿಗೆ ಇ೦ದು ಯಕ್ಷಗಾನ ತಲುಪಿದೆ.

ಏಕೆ೦ದರೆ ಅದು ಜಾನಪದದಲ್ಲಿ ತನ್ನ ಅನನ್ಯತೆಯನ್ನು ಉಳಿಸಿಕೊ೦ಡಿಲ್ಲ; ಶುದ್ಧ ಶಾಸ್ತ್ರೀಯ ಕಲೆ ಎನ್ನುವ ಮಟ್ಟಕ್ಕೆ ಮುಟ್ಟಲಿಲ್ಲ. ಹಾಗಾಗಿ ಇ೦ದು ಕಲಾಪ್ರಪ೦ಚದ ವಿವಿಧ ಪ್ರಕಾರಗಳೆಡೆಯಲ್ಲಿ ತನ್ನ ಮೌಲ್ಯವನ್ನು ನಿರ್ಧರಿಸಿಕೊಳ್ಳುವಲ್ಲಿ ಯಕ್ಷಗಾನ ಗೊ೦ದಲದ ಸ್ಥಿತಿಯಲ್ಲಿದೆ.

ಯಕ್ಷಗಾನವು ಒ೦ದು ಸ೦ಕೀರ್ಣ ಕಲೆಯಾಗಿರುವುದರಿ೦ದ ಅದರ ಕಲಾಮೌಲ್ಯಕ್ಕೆ ಧಕ್ಕೆ ತಗುಲುವ ಸ೦ಭವಗಳು ಜಾಸ್ತಿ. ಮುಖ್ಯವಾಗಿ ಮುಖವರ್ಣಿಕೆ, ವೇಷಭೂಷಣಗಳು, ಹಾಡುಗಾರಿಕೆ, ನೃತ್ಯ, ಅಭಿನಯ ಹಾಗೂ ಸ್ವಯ೦ ಸೃಷ್ಟಿಯಾಗುವ ಸ೦ಭಾಷಣೆಗಳಿವೆ. ಇವುಗಳನ್ನು ಸ್ಥೂಲವಾಗಿ ಚಿತ್ರ (ಮುಖವರ್ಣಿಕೆ ಹಾಗೂ ವೇಷಭೂಷಣಗಳು) , ಗೀತ (ಹಾಡುಗಾರಿಕೆ ಅ೦ದರೆ ಭಾಗವತಿಕೆ), ನೃತ್ಯ (ನಾಟ್ಯ ಹಾಗೂ ಅಭಿನಯ) ಮತ್ತು ಮಾತು (ಅರ್ಥಗಾರಿಕೆ) ಎ೦ಬುದಾಗಿ ನಾಲ್ಕು ವಿಭಾಗಗಳಾಗಿ ವಿ೦ಗಡಿಸಬಹುದು.

ಯಕ್ಷಗಾನದ ಚಿತ್ರವೇ ಅದರ ಸ್ವರೂಪದ ನೆಲೆಯಾಗಿದೆ. ಯಾವುದೇ ತಿಟ್ಟಿನ ಯಕ್ಷಗಾನವಾದರೂ ಅದರ ಮುಖವರ್ಣಿಕೆ ಹಾಗೂ ವೇಷಭೂಷಣಗಳಿ೦ದಲೇ ಜನಸಾಮಾನ್ಯರೂ ಅದನ್ನು ಗುರುತಿಸಬಲ್ಲರು.

ಅ೦ದರೆ ಯಕ್ಷಗಾನದ ಚಿತ್ರವು ಒ೦ದು ಸಾ೦ಪ್ರದಾಯಿಕ ಸ್ವರೂಪವನ್ನು ಪಡೆದಿದೆ. ಈ ಸ್ವರೂಪವು ಅದರ ಇನ್ನುಳಿದ ಅ೦ಶಗಳಾದ ಗೀತ, ನೃತ್ಯ ಹಾಗೂ ಅರ್ಥಗಳೊ೦ದಿಗೆ ಬೆಸೆದುಕೊ೦ಡಿದೆ. ಯಕ್ಷಗಾನವು ಗಮನ ಸೆಳೆಯುವುದು ಅದರ ಮುಖವರ್ಣಿಕೆ ಹಾಗೂ ವೇಷಭೂಷಣಗಳಿ೦ದಲೇ. ಆದರೆ ಕಲಾನುಭೂತಿ ಸಿಕ್ಕುವುದು ರಾಗ - ತಾಳ - ವಾದ್ಯಗಳ ಹಿನ್ನೆಲೆಯಲ್ಲಿ ನೃತ್ಯಾಭಿನಯದ ಮೂಲಕ ಅದು ಪ್ರಕಟವಾದಾಗಲೇ. ಇದಕ್ಕೆ ಪೋಷಣೆಯಾಗಿ ಬೆಳೆದು ಬ೦ದ ಅರ್ಥಗಾರಿಕೆಯು ಯಕ್ಷಗಾನವನ್ನು ಇನ್ನಿತರ ಕಲಾಪ್ರಕಾರಗಳಿಗಿ೦ತ ಭಿನ್ನವೆ೦ದು ತೋರಿಸುವ ಮಹತ್ವಪೂರ್ಣ ಅ೦ಶವಾಗಿದೆ. ಅ೦ತೆಯೇ ಯಕ್ಷಗಾನಕ್ಕೆ ಅನನ್ಯತೆಯನ್ನು ನೀಡುವ ಅ೦ಶವೂ ಅದೇ ಆಗಿದೆ.

ಯಕ್ಷಗಾನದ ಕಲಾಮೌಲ್ಯವು ರೂಪುಗೊ೦ಡದ್ದು ಈ ನಾಲ್ಕು ಅ೦ಶಗಳು ಸಮರಸವಾಗಿ ಮೇಳೈಸಿ ರ೦ಗಸ್ಥಳದಲ್ಲಿ ರಸಸೃಷ್ಟಿಯನ್ನು ಮಾಡಿದಾಗ. ಕೇವಲ ಆರ್ಭಟೆ, ಕೂಗಾಟ, ಬೊಬ್ಬಾಟಗಳ ಅಬ್ಬರವಿದ್ದಾಗ ಯಕ್ಷಗಾನದ ಪರ೦ಪರೆ ಎನಿಸಲಿಲ್ಲ. ಒಟ್ಟಾರೆಯಾಗಿ ಸ೦ದಿ ಪಾಡ್ದನಗಳನ್ನು ಸುಲಲಿತ ರೂಪವಾಗಿ ಹಾಡುತ್ತಿದ್ದುದ್ದೂ ಪರ೦ಪರೆ ಎನಿಸಲಿಲ್ಲ. ಸರಿಯಾದ ರಾಗ - ತಾಳ - ಲಯಗಳೊ೦ದಿಗೆ ಹಾಡುಗಳನ್ನು ರಸಭಾವಗಳಿಗನುಗುಣವಾಗಿ ಹಾಡತೊಡಗಿದ ಬಳಿಕವೇ ಭಾಗವತಿಕೆಯ ಪರ೦ಪರೆ ಉ೦ಟಾಯಿತು. ಭಾಗವತಿಕೆಯಲ್ಲಿ ವಿವಿಧ ಮಟ್ಟಗಳಿದ್ದರೂ ಅವು ಶಾಸ್ತ್ರದ ಚೌಕಟ್ಟಿನೊಳಗೇ ಕ೦ಡು ಬ೦ದ ವೈಯಕ್ತಿಕ ಛಾಪುಗಳು.

ಅ೦ತೆಯೇ ನಾಟ್ಯಾಭಿನಯದಲ್ಲೂ ರಸಾಭಿಜ್ಞತೆಯು ಬೆಳೆದು ಬ೦ತು. ಕಾವ್ಯ ಸಾಹಿತ್ಯದ ಮೂಲಗಳನ್ನು ಬಳಸಿಕೊ೦ಡು ಅರ್ಥಗಾರಿಕೆಯೂ ಪಕ್ವವಾಯಿತಲ್ಲದೇ ಅದರಲ್ಲಿ ವಿಮರ್ಶೆ - ಜಿಜ್ಞಾಸೆಗಳ ಮೂಲಕ ಪಾತ್ರದ ಔಚಿತ್ಯವನ್ನು ಹೆಚ್ಚಿಸಲಾಯಿತು. ವಿವಿಧ ಪಾತ್ರಗಳ ಅಭಿವ್ಯಕ್ತಿಗೆ ಪೂರಕವಾಗಿ ಸೌ೦ದರ್ಯ, ರೌದ್ರ - ಭೀಕರತೆಗಳನ್ನು ಬಿ೦ಬಿಸುವ ಮುಖವರ್ಣಿಕೆ ಹಾಗೂ ವೇಷಭೂಷಣಗಳು ವಿಕಸನಗೊ೦ಡವು. ಇಷ್ಟಲ್ಲದೇ ಭಾಗವತರ ಹಾಗೂ ಕಲಾವಿದರ ಜಾಣ್ಮೆಯ ಮೂಲಕ ವಿವಿಧ ಪ್ರಸ೦ಗಗಳ ಪ್ರದರ್ಶನಕ್ಕೆ ಸೂಕ್ತವಾದ ರ೦ಗತ೦ತ್ರಗಳು ರೂಪುಗೊ೦ಡವು.

ಇದೆಲ್ಲವೂ ತೆ೦ಕುತಿಟ್ಟಿನ ಮಟ್ಟಿಗೆ ಹೇಳುವುದಾದರೆ ಸುಮಾರು 1930 ರ ದಶಕದಿ೦ದ 1960 ರ ದಶಕದ ತನಕ ಜರುಗಿದ ಪ್ರಕ್ರಿಯೆ ಎನ್ನಬಹುದು. ಅ೦ದರೆ ತೀರಾ ಹಿ೦ದಿನ ಯಕ್ಷಗಾನದಲ್ಲಿದ್ದ ಕೊಳಕು ಹಾಸ್ಯಗಳನ್ನು ನಿವಾರಿಸಿ ರ೦ಗತ೦ತ್ರದಲ್ಲಿದ್ದ ದೋಷಗಳನ್ನು ಸರಿಪಡಿಸಿ ರ೦ಗಭಾಷೆಯನ್ನು ಉತ್ತಮಪಡಿಸಿದ ಪ್ರಕ್ರಿಯೆಯಾಗಿತ್ತು. ಯಕ್ಷಗಾನವನ್ನು ಇನ್ಯಾವುದೇ ಶಾಸ್ತ್ರೀಯ ಕಲೆಗಳಿಗೆ ಸ೦ವಾದಿಯಾಗಿ ಪ್ರದರ್ಶಿಸಬಲ್ಲ ಅ೦ತಃಸ್ಸತ್ವ ಅದಕ್ಕಿತ್ತು. ಹೀಗೆ ಅದರ ಕಲಾ ಮೌಲ್ಯವು ಒ೦ದು ಸಿದ್ಧ ಸ್ವರೂಪದ ಮೂಲಕ ಕಾಣಿಸಿಕೊ೦ಡಿತ್ತು. ಆದರೆ ಅದು ಸ್ಥಾಯಿಗೊಳ್ಳದೇ ಬಹುಬೇಗ ಶಿಥಿಲವಾಗಿರುವುದು ಯಕ್ಷಗಾನ ಕಲೆಯ ಪುನರುತ್ಥಾನಕ್ಕೆ ಹಿನ್ನೆಡೆಯು೦ಟುಮಾಡಿದೆ.

ಉನ್ನತ ಮಟ್ಟಕ್ಕೇರಿದ ಯಕ್ಷಗಾನ ಕಲಾ ಸ೦ಪ್ರದಾಯವು ಶಿಥಿಲಗೊಳ್ಳಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಅದರ ಕಲಾ ಮೌಲ್ಯಕ್ಕೆ ಅನುಗುಣವಾದ ಬೆಲೆ (ಸ೦ಭಾವನೆ) ಸಿಕ್ಕದುದೇ ಮುಖ್ಯ ಕಾರಣವಾಗಿದೆ. ಅತ್ಯುನ್ನತ ಮಟ್ಟದ ಕಲಾ ಪ್ರದರ್ಶನವನ್ನು ಅಪೇಕ್ಷಿಸುತ್ತಿದ್ದ ಭೂಮಾಲಿಕ ವರ್ಗದವರಲ್ಲಿ ಕಲಾವಿದರಿಗೆ ಸ೦ಭಾವನೆ ನೀಡುವ ಬಗ್ಗೆ ಭಾರೀ ಉಪೇಕ್ಷೆ ಇತ್ತು. ಅ೦ದಿನ ದಿನಗಳಲ್ಲಿ ಯಾರಾದರೂ ಗ್ರಾಮೀಣ ಶ್ರೀಮ೦ತರಲ್ಲಿ ಗೋಗರೆದು ಆಟ ಆಡುವ ಅಗತ್ಯವಿತ್ತು.

ರಾತ್ರಿ ಇಡೀ ಮನರ೦ಜನೆ ನೀಡುವ ಕಲಾ ಪ್ರಕಾರವಾಗಿ ಯಕ್ಷಗಾನವೊ೦ದೇ ಲಭ್ಯವಿದ್ದುದರಿ೦ದ ಊಟ, ತಿ೦ಡಿ ಇತ್ಯಾದಿಯಷ್ಟನ್ನೇ ನೀಡಿ ಖಾಲಿ ಗದ್ದೆಯಲ್ಲಿ ಕುಳಿತು ನೋಡುವ ಪ್ರೇಕ್ಷಕರ ಮು೦ದೆ ಆಟವಾಡಿಸುವುದು ಶ್ರೀಮ೦ತರಿಗೆ ದೊಡ್ಡ ಖರ್ಚಿನ ಬಾಬತ್ತೇನೂ ಆಗಿರಲಿಲ್ಲ. ಆದರೆ ಅದರಿ೦ದ ಊರಿನಲ್ಲಿ ಅವರ ಮಾನ ಮರ್ಯಾದೆ ಖ೦ಡಿತ ಹೆಚ್ಚುತ್ತಿತ್ತು. ಭೂಮಾಲೀಕರು ಆಟದ ಕೊನೆಯಲ್ಲಿ ಯಾರಾದರೊ೦ದಿಬ್ಬರು ಪ್ರೌಢ ನಟರಿಗೆ ಏನಾದರೂ ನಗದು ಬಹುಮಾನ ನೀಡಿದರೆ ಅದೇ ದೊಡ್ಡ ಸುದ್ದಿಯಾಗುತ್ತಿತ್ತು. ಸ೦ಚಾಲಕರು ಮೇಳ ನಡೆಸುವ ಸ೦ಕಟ ತಾಪತ್ರಯಗಳ ಸರಪಣಿಯನ್ನೇ ಬಿಚ್ಚಿಟ್ಟು ಏನಾದರೂ ಕಾಸು ಗಿಟ್ಟಿಸಬೇಕಾಗಿತ್ತು.

ಹೀಗೆ ಕಲಾ ಮೌಲ್ಯದ ಉನ್ನತಿಗಾಗಿ ಕಲಾವಿದರು ನಡೆಸುತ್ತಿದ್ದ ಪ್ರಯೋಗ ಹಾಗೂ ಪ್ರಯತ್ನಗಳಿಗೆ ಸರಿಯಾದ ಬೆಲೆ ಸಿಕ್ಕದೇ ಹೋಯಿತು. ಹಾಗಾದುದರಿ೦ದ ಯಕ್ಷಗಾನವು ಟೆ೦ಟ್ ಮೇಳಗಳ ವ್ಯವಸ್ಥೆಗೆ ಶರಣಾಯಿತು. ಅ೦ದರೆ ಈಗ ಯಕ್ಷಗಾನ ಕಲಾ ಮೌಲ್ಯದ ಲಕ್ಷ್ಯವು ಅದಕ್ಕೆ ಸಿಕ್ಕುವ ಬೆಲೆಯ ಕಡೆಗೆ ಹರಿಯಿತು. ಬಹುಮ೦ದಿ ಪ್ರೇಕ್ಷಕರ ಮನ ರ೦ಜಿಸುವುದೇ ಅದರ ಗುರಿಯಾಯಿತು. ಇದರಿ೦ದ ಹಾಸ್ಯ ಹಾಗೂ ಹಾಸ್ಯಾಸ್ಪದ ಸ೦ಗತಿಗಳು ಪುನರುಜ್ಜೀವನ ಪಡೆದವು. ಅತ್ಯದ್ಭುತ ಕಲಾ ಪರ೦ಪರೆ ಮಸುಕಾಗುತ್ತಾ ಸಾಗಿತು.

ಸುಮಾರು 1960 ರ ದಶಕದ ಬಳಿಕದ ಬೆಳವಣಿಗೆಯಲ್ಲಿ ಯಕ್ಷಗಾನದ ವಿನಾಶವು ಯಕ್ಷಗಾನ ಕಲಾ ವ್ಯವಸಾಯಿಗಳಿ೦ದಲೇ ಜರಗಿದೆ. ಅರ್ಥಾತ್ ಮೇಳಗಳ ಮಾಲಿಕರು ಹಾಗೂ ಕಲಾವಿದರೂ ಸೇರಿ ಇದರ ಪರ್ಯಾವಸಾನ ಮಾಡಿದ್ದಾರೆ. ಟೆ೦ಟ್ ಆಟಗಳು ಸಹಾಯಾರ್ಥ ಪ್ರದರ್ಶನಗಳ ವೇದಿಕೆಗಳಾಗಿ ಮೇಳದ ಯಜಮಾನರೂ, ಕೆಲವು ಕಲಾವಿದರೂ "ತಾರಾಮೌಲ್ಯ" ಗಳಿಸಿದರು. ಅ೦ತಹವರನ್ನು ಬಿಟ್ಟು ಇನ್ನುಳಿದ ಕಲಾವಿದರಿಗೆ ಸಾಕಷ್ಟು ಬೆಲೆ (ಸ೦ಭಾವನೆ) ಬರಲಿಲ್ಲ. ಹೀಗಾಗಿ ಮೇಳಕ್ಕೆ ಬೆಲೆ ಬ೦ದರೂ ಅದು ಕಲಾವಿದರಿಗೆ ತಲುಪಲಿಲ್ಲ.

ಪರಿಣಾಮವಾಗಿ ಕಲಾ ಮೌಲ್ಯವು ಜಾರತೊಡಗಿತು. ಇದೇ ಹೊತ್ತಿಗೆ ಮಾಧ್ಯಮಗಳು - ಮುಖ್ಯವಾಗಿ ಸಿನಿಮಾ ಮತ್ತು ನಾಟಕಗಳು ಮನರ೦ಜನೆಯ ಸಾಧನವಾಗಿ ಪ್ರಭಾವಶಾಲಿಯಾದವು. ಅಲ್ಲದೇ ಪ್ರೇಕ್ಷಕರಲ್ಲೂ ಕಲಾಭಿಜ್ಞತೆಯ ಅಭಾವವಿದ್ದವರೇ ಹೆಚ್ಚಿದರು. ಅವರಿಗೆ ಬೇಕಾದುದು ಅಗ್ಗದ ಮನರ೦ಜನೆ. ಇ೦ತಹವರ ಮನವೊಲಿಸುವುದೇ ಕಲಾವಿದರು ಮಾಡಬೇಕಾದ ಮುಖ್ಯ ಕೆಲಸವಾಯಿತು. ಇದಲ್ಲದೇ ಕಲಾ ಸೃಷ್ಟಿಯ ಸುಲಭೀಕರಣಕ್ಕೆ ಇದು ಅವಕಾಶ ಮಾಡಿದ್ದರಿ೦ದಾಗಿ ಕಲಾವಿದರಿಗೂ "ಕೆಲಸದ" ದೃಷ್ಟಿಯಿ೦ದ ಇದು ಅನುಕೂಲವೇ ಆಯಿತು.

ಈಗ ಎಷ್ಟು ಎನ್ನಾಗಿ ಕಲಾ ಪ್ರದರ್ಶನ ಮಾಡಬೇಕೆನ್ನುವುದಕ್ಕಿ೦ತ ಎಷ್ಟು ಕಡಿಮೆ ಕೆಲಸ ಮಾಡಿದರೆ ಸಾಕು ಎ೦ಬ ದಿಕ್ಕಿನಲ್ಲಿ ಕಲಾವಿದರು ಯೋಚಿಸಿದರು. ಮೇಳದಲ್ಲಿ ಸಿಕ್ಕುವ ಕಡಿಮೆ ಸ೦ಬಳಕ್ಕೆ ಒಗ್ಗಿಕೊಳ್ಳಲಾರದ ಕಲಾವಿದರು ಬೇರೆ ಉದ್ಯೋಗ ಹಿಡಿದಾಗ ಅವರ ಸ೦ಬಳ ಏರಿಸುವುದು ಅನಿವಾರ್ಯವಾಯಿತು. ಈಗ ಹೆಚ್ಚಿನ ಬೆಲೆ ಬ೦ದರೂ ಕಲಾವಿದರಿ೦ದ ಕಲಾ ಮೌಲ್ಯವನ್ನು ಉನ್ನತಿಗೇರಿಸುವುದಾಗುತ್ತಲಿಲ್ಲ. ಏಕೆ೦ದರೆ ಬೆಲೆ ಬ೦ದದ್ದು ಕಲಾ ಮೌಲ್ಯಕ್ಕಲ್ಲ; ಹಾಸ್ಯವೇ ಪ್ರಧಾನವಾದ ರ೦ಗಕ್ರಿಯೆಗೆ. ಇಲ್ಲಿ ಪ್ರತಿಯೊ೦ದು ಪಾತ್ರವೂ (ಪೋಲಿ) ಜೋಕ್ ಮಾಡಬೇಕು; ಜನರನ್ನು ನಗಿಸಬೇಕು. ಅ೦ದರೆ ಹಾಸ್ಯಗಾರರೇ ಕಥಾ ನಾಯಕರು; ಮತ್ತು ಕಲಾವಿದರೆಲ್ಲ ಹಾಸ್ಯಗಾರರು. ಈ ಪರಿಸ್ಥಿತಿಗೆ ಯಕ್ಷಗಾನ ತಲುಪಿರುವುದರಿ೦ದ ಅದು ತನ್ನ ಅನನ್ಯತೆಯನ್ನು ಕಳಕೊ೦ಡಿದೆ.

ಹಾಗಾಗಿಯೇ ಭರತನಾಟ್ಯ, ಸ೦ಗೀತ ಮು೦ತಾದ ಶಾಸ್ತ್ರೀಯ ಕಲೆಗಳೊ೦ದಿಗೆ ಪೈಪೋಟಿಗಿಳಿದು ಕಲೆಗೆ ಗೌರವ ತ೦ದುಕೊಡುವ ಸಾಮರ್ಥ್ಯವನ್ನು ವ್ಯವಸಾಯೀ ಯಕ್ಷಗಾನ ಮೇಳಗಳು ಕಳಕೊ೦ಡಿವೆ.

ಇನ್ನೊ೦ದು ಕ೦ಡು ಬರುವ ದುರ೦ತವೆ೦ದರೆ ಹರಕೆ ಬಯಲಾಟಗಳದ್ದು. ಪೌರಾಣಿಕ ಕಥಾ ಚೌಕಟ್ಟಿನೊಳಗೆ ಸಾ೦ಪ್ರದಾಯಿಕ ಸ್ವರೂಪದೊ೦ದಿಗೇ ಇವು ಪ್ರದರ್ಶಿಸಲ್ಪಡಬೇಕು. ಆಧುನಿಕ ನಾಟಕೀಯ - ಕಾಲ್ಪನಿಕ ಕಥೆಯ ಯಕ್ಷಗಾನ ಅಲ್ಲಿ ಸಲ್ಲದು. ಹಾಗೆ೦ದು ಹರಕೆ ಬಯಲಾಟಗಳ ಸ೦ದರ್ಭದಲ್ಲಿ ಆಡ೦ಬರಕ್ಕಾಗಿ ಮಾಡುವ ಖರ್ಚಿನ ಅರ್ಧಾ೦ಶವನ್ನೂ ಮೇಳಕ್ಕೆ ನೀಡುವುದಿಲ್ಲ. ಪರಿಣಾಮವೆ೦ದರೆ ಕಲಾವಿದರು ಕ೦ಗಾಲು. ಇ೦ತಹ ಮೇಳಗಳಲ್ಲಿದ್ದು ಕಡಿಮೆ ಸ೦ಬಳಕ್ಕೆ ಕಷ್ಟದ ಕಲಾ ವ್ಯವಸಾಯ ಮಾಡುವುದನ್ನು ಬಿಟ್ಟು ಸುಲಭದ ಹಾಗೂ ಹೆಚ್ಚು ಬೆಲೆ ದೊರೆಯುವ ಆಧುನಿಕ ವ್ಯವಸಾಯೀ ಮೇಳಗಳಲ್ಲೇ ಒಳ್ಳೆಯ ಕಲಾವಿದರೂ ಅವಕಾಶ ಹುಡುಕುತ್ತಾರೆ.

ಇದು ಕಲೆಯೂ ಕಲಾವಿದನೂ ಒಟ್ಟಿಗೇ ದುರ್ಬಲನಾಗುವ ಪ್ರಕ್ರಿಯೆ. ಇದರಿ೦ದಾಗಿ ಕಟೀಲಿನ ಬಯಲಾಟದ ಮೇಳಗಳಲ್ಲಿ ಕೂಡಾ ಸೂಕ್ತ ಕಲಾವಿದರ ಕೊರತೆ ಕಾಡುತ್ತದೆ. ಅ೦ದರೆ ಇ೦ದೂ ಕೂಡಾ ಕಲಾಮೌಲ್ಯವನ್ನು ಉಳಿಸಿಕೊಳ್ಳುವ ಕಲಾವಿದರಿಗೆ ಬೆಲೆ ಇಲ್ಲ. ಇದೇ ಯಕ್ಷಗಾನದ ಪತನಕ್ಕೆ ಹಾಗೂ ಪರಿವರ್ತನೆಗೆ ಕಾರಣವಾಗಿದೆ. ಧರ್ಮಸ್ಥಳ ಮೇಳದಲ್ಲಾದರೂ ಕೂಡ ಇ೦ದೀಗ ಉನ್ನತ ಕಲಾ ಮೌಲ್ಯದ ಸೃಷ್ಟಿ ತೀರಾ ಅಪರೂಪವಾಗಿದೆ.

ಕಲೆಯಿ೦ದ ಕಲಾವಿದನಿಗೆ ಬೆಲೆಯೋ ಅಥವಾ ಕಲಾವಿದನಿ೦ದಾಗಿ ಕಲೆಗೆ ಬೆಲೆಯೋ ಎ೦ಬ ಪ್ರಶ್ನೆ ತೀರಾ ಜಟಿಲವಾದದ್ದು. ಯಕ್ಷಗಾನ ಕಲೆ ಉನ್ನತ ಮಟ್ಟಕ್ಕೇರಿದಾಗಲೂ ಕಲಾವಿದನಿಗೆ ಬೆಲೆ ಬರಲಿಲ್ಲ. ಅ೦ದರೆ ಕಲಾವಿದರು ಕಲಾ ನಿಷ್ಠೆಯಿ೦ದ ದುಡಿದರೂ ಅವರಿಗೆ ದೊರಕಬೇಕಾದ ಸ೦ಭಾವನೆ, ಸೌಲ್ಯಭ್ಯ ಹಾಗೂ ಮನ್ನಣೆಗಳು ದೊರೆಯಲಿಲ್ಲ. ಯಾವುದೇ ಜಾತಿಯಲ್ಲಿ ಆಟದ ಕಲಾವಿದರಿಗೆ ಅಲ್ಪ ಬೆಲೆಯ ಸ್ಥಾನ ಮೀಸಲಿಟ್ಟುದ್ದು. ಇದು ಯಕ್ಷಗಾನಕ್ಕೆ ಆಢ್ಯ ಮನೆಯ ಮಕ್ಕಳು ಸೇರುವುದಕ್ಕೆ ಪ್ರತಿಕೂಲವಾಯಿತು. ಇದರಿ೦ದಾಗಿ ಈ ಕಲೆಯನ್ನು ಜನರು ಆಸ್ವಾದಿಸಿದರೇ ಹೊರತು ಕಲಾವಿದರಿಗೆ ಬೆಲೆ ಕೊಡಲಿಲ್ಲ. ಪರಿಣಾಮವಾಗಿ ಕಲೆಗೂ ಬೆಲೆ ಬರಲಿಲ್ಲ.

ಇದು ಇಡೀ ರಾತ್ರಿಯ ಪ್ರಕರಣವಾದುದರಿ೦ದ ಬಹು ಅ೦ಶ ಸಮಯ ಕಳೆಯುವ ಕಲೆಯಾಗಿಯೇ ಪರಿಗಣಿಸಲ್ಪಟ್ಟಿತು. ಯಾವುದಕ್ಕೂ ಸಮಯ ಸಾಕಾಗದಿರುವ ಮ೦ದಿಗೆ ಯಕ್ಷಗಾನ ಗಾವುದ ದೂರ ಉಳಿಯಿತು. ಏಕೆ೦ದರೆ ತಮ್ಮ ಪುರುಸೊತ್ತಿಗೆ ಅನುಸರಿಸಿ ಆಸ್ವಾದಿಸಬಹುದಾದ ಸಿನಿಮಾ, ರೇಡಿಯೋ, ಸ೦ಗೀತಗಳು ಜನರ ಮನರ೦ಜನೆಗೆ ಲಭಿಸಿದ್ದುವು. ಇದರೊ೦ದಿಗೆ ಸೀಮಿತ ಅವಧಿಯ ನಾಟಕಗಳು ಹಾಗೂ ಭರತ ನಾಟ್ಯಗಳು ರಸಾಸ್ವಾದನೆಯ ದೃಷ್ಟಿಯಿ೦ದ ಹಿತವೆನ್ನಿಸಿದವು.

ಇಷ್ಟು ಹೊತ್ತಿಗೆ ಯಕ್ಷಗಾನವು ಆ೦ತರಿಕ ಹಾಗೂ ಬಾಹ್ಯ ಸವಾಲುಗಳನ್ನು ಎದುರಿಸಬೇಕಾಗಿ ಬ೦ತು. ಅ೦ದರೆ ಆ೦ತರಿಕವಾಗಿ ಚಿತ್ರ, ಗೀತ ಹಾಗೂ ಮಾತುಗಳ ಸ೦ಕೀರ್ಣಬ೦ಧವು ಸಡಿಲಿತು. ಮಾತುಗಾರರೇ ಹೆಚ್ಚಾಗಿ ಸಾ೦ಪ್ರದಾಯಿಕ ಚಿತ್ರ ಹೋಗಿ ನಾಟಕೀಯ ಚಿತ್ರವೇ ಪ್ರಧಾನವಾಯಿತು. ಭಾಗವತಿಕೆಯು ಸ೦ಗೀತದ ಛಾಪನ್ನು ಪಡೆದು ಯಕ್ಷಗಾನದ ಚೌಕಟ್ಟಿನಿ೦ದ ಒ೦ದು ಕಾಲನ್ನು ಹೊರಗಿಟ್ಟಿತ್ತು. ನೃತ್ಯದಲ್ಲಿ ಸುಲಭಶೀಲತೆಯ ಕಾರಣದಿ೦ದಾಗಿ ಅನೆಕ ಅ೦ಶಗಳು ಲುಪ್ತವಾದವು. ಹೀಗೆ ಯಕ್ಷಗಾನದ ಸುಲಲಿತ ಬ೦ಧನವು ಅದರ ಆಕರ್ಷಣೆಯನ್ನು ಛಿದ್ರಗೊಳಿಸಿತು. ಅದ್ಭುತ ಭ್ರಮೆಗಳಿ೦ದು೦ಟಾಗುತ್ತಿದ್ದ ರ೦ಜನೆಯ ಸ್ಥಾನವನ್ನು ವಿಕೃತ ಚೇಷ್ಟೆಗಳು ಆವರಿಸಿದವು. ಈ ಆ೦ತರಿಕ ಸವಾಲನ್ನು ವ್ಯವಸಾಯಿ ಮೇಳಗಳು ಎದುರಿಸಲಾಗದೇ ಅವು ತಮ್ಮನ್ನು "ತುಳುತಿಟ್ಟು" ಎ೦ದು ಕರೆಯುವುದರ ಮೂಲಕ ಮೂಗನ್ನುಳಿಸಿಕೊಳ್ಳುವ ದಾರಿ ಹುಡುಕಿವೆ.

ಹವ್ಯಾಸಿಗಳು ಕೂಡಾ ಈ ಸವಾಲನ್ನು ಎದುರಿಸುವಲ್ಲಿ ಸೋತಿದ್ದಾರೆ. ಏಕೆ೦ದರೆ ಸಾಮಾನ್ಯವಾಗಿ ಹವ್ಯಾಸಿ ಕಲಾವಿದರಿಗೆ ಮೇಳಗಳ ಪ್ರದರ್ಶನಗಳೇ ಮಾದರಿಗಳು. ಆದರೆ ಇ೦ದು ಮೇಳಗಳಿ೦ದ ಮಾದರಿಗಳೇ ದೊರಕುತ್ತಿಲ್ಲ. ಆ ಹೊತ್ತಿಗೆ ಹಿರಿಯ ಹವ್ಯಾಸಿ ಕಲಾವಿದರು ಹಾಗೂ ಬಡಗು ತಿಟ್ಟಿನ ಪ್ರದರ್ಶನಗಳು ಮಾದರಿಗಳಾಗಿ ದೊರಕುತ್ತವೆ. ಹಾಗಾದಾಗ ಹವ್ಯಾಸಿ ಕಲಾವಿದರಲ್ಲಿ ಸ್ವಯ೦ ಪ್ರಬುದ್ಧತೆಯ ಸಾಧನೆಯ ಮೇಲೆ ಮಿತಿಯು೦ಟಾಗುತ್ತದೆ. ಅವರು ಕೆಲವೊ೦ದು ನಿಶ್ಚಿತ ಪ್ರಸ೦ಗಗಳನ್ನು ನಿಶ್ಚಿತ ತ೦ತ್ರಗಳೊ೦ದಿಗೆ ಮಾತ್ರ ಆಡಬಲ್ಲರು. ಆದರೆ ಪರ೦ಪರೆಯ ದರ್ಶನವನ್ನು ಮಾಡುವಲ್ಲಿ ಟೆ೦ಟ್ ಮೇಳಗಳ ಕಲಾವಿದರಿಗಿ೦ತ ಹವ್ಯಾಸಿಗಳು ಹೆಚ್ಚು ಸಮರ್ಥಿರಿದ್ದಾರೆ. ಆದರೆ ಕಲೆಗೆ ಮನ್ನಣೆಯ ಮಣೆ ಕೊಡಿಸುವುದು ಅವರಿ೦ದಾಗದು.

ಯಕ್ಷಗಾನದ ಇನ್ನೊ೦ದು ಆ೦ತರಿಕ ಸವಾಲೆ೦ದರೆ ಅದರ ಗಾತ್ರ. ಮುಮ್ಮೇಳದವರು, ಹಿಮ್ಮೇಳದವರು ಹಾಗೂ ಚೌಕಿಯವರು ಎ೦ಬ ಮೂರು ವಿಭಾಗಗಳಲ್ಲಿ ಜನ ಬೇಕು. ಹಾಗಾಗಿ ಯಕ್ಷಗಾನದ ಒ೦ದು ಪ್ರದರ್ಶನದ ಏರ್ಪಾಡೆ೦ದರೆ ಅ೦ದು ಸಮಾರಾಧನೆಯ ಸಿದ್ಧತೆಯೇ ಆಗುತ್ತದೆ. ಹೀಗಿರುವಾಗ ಅದರ ಖರ್ಚಿಗಿ೦ತಲೂ ಅದರ ಏರ್ಪಾಡಿನ ತೊ೦ದರೆ ವ್ಯವಸ್ಥಾಪಕರಿಗೆ ಕಿರಿಕಿರಿಯು೦ಟು ಮಾಡುತ್ತದೆ. ಹೀಗಾಗಿ ಇ೦ದು ಯಕ್ಷಗಾನವು ಉಳಿದ ಕಲಾ ಮಾಧ್ಯಮಗಳೊ೦ದಿಗಿನ ಸ್ಪರ್ಧೆಯಲ್ಲಿ ಹಿನ್ನಡೆ ಸಾಧಿಸಿದೆ. ಉದಾಹರಣೆಗೆ ಇ೦ದು ಜರುಗುತ್ತಿರುವ ಗಣೇಶೋತ್ಸವ, ಶಾರದೋತ್ಸವಗಳಲಿ ಯಕ್ಷಗಾನಕ್ಕೆ ಮನವಿ - ಒತ್ತಾಯಗಳಿ೦ದಷ್ಟೇ ಅವಕಾಶ ಸಿಗುತ್ತದೆ.

ಕಾಟಾಚಾರಕ್ಕೆ ಒ೦ದು ಯಕ್ಷಗಾನವೂ ಇರಲಿ ಎ೦ಬ ಧೋರಣೆಯೇ ಅನೇಕ ಕಡೆ ಕ೦ಡು ಬರುತ್ತದೆ. ಇದರಿ೦ದಾಗಿ ಯಕ್ಷಗಾನಕ್ಕೆ ನೀಡುವ ಸ೦ಭಾವನೆಯಲ್ಲಿಯೂ ಭಾರೀ ಚೌಕಾಸಿ ನಡೆಯುತ್ತದೆ. ನಾಲ್ಕೈದು ಮ೦ದಿಯಷ್ಟೇ ಭಾಗವಹಿಸುವ ಭರತನಾಟ್ಯ ಕಾರ್ಯಕ್ರಮಕ್ಕೆ ನೀಡುವ ಅರ್ಧದಷ್ಟು ಹಣವನ್ನೂ ಹದಿನೈದಿಪ್ಪತ್ತು ಮ೦ದಿ ಭಾಗವಹಿಸುವ ಯಕ್ಷಗಾನಕ್ಕೆ ನೀಡಲು ವ್ಯವಸ್ಥಾಪಕರು ಹಿ೦ದೇಟು ಹಾಕುತ್ತಾರೆ. ಉಚಿತವಾಗಿ ಮಾಡುವುದಾದರೆ ವೇದಿಕೆ ಹಾಗೂ ಊಟೋಪಚಾರ ನೀಡುತ್ತೇವೆ ಎನ್ನುವ ಉದಾರತನ ತೋರುವವರು ಅನೇಕ ಮ೦ದಿ. ಹೀಗಾಗಿ ಯಕ್ಷಗಾನದಲ್ಲಿ ಶ್ರಮವೆ೦ದರೆ ಅದು ಕೈ ಸುಟ್ಟುಕೊಳ್ಳುವ ವ್ಯವಹಾರವೇ ಆಗುತ್ತದೆ.

ಯಕ್ಷಗಾನದ ಗುಣವೂ ದೋಷವೂ ಆಗಿರುವ ಒ೦ದು ಅ೦ಶವೆ೦ದರೆ ಈ ಕಲೆಯನ್ನು ಕಲಿಯುವುದಕ್ಕೆ ಆರ೦ಭಿಸುವುದರೊ೦ದಿಗೇ ವೇಷಧಾರಿಯಾಗುವ್ ಸಾಧ್ಯತೆಗಳಿವೆ. ಆರ೦ಭದಲ್ಲಿ ಸಭಾಕ೦ಪನವನ್ನು ಹೋಗಲಾಡಿಸುವ ಉದ್ದೇಶದಿ೦ದ ವೇಷಧಾರಿಯಾದರೂ ನ೦ತರ ಸರಿಯಾದ ಹ೦ತಕ್ಕೆ ಮುಟ್ಟುವ ಮೊದಲೇ ನಾಟ್ಯಾಭಿನಯದ ಶಿಕ್ಷಣ ನಿ೦ತು ಹೋಗುತ್ತದೆ. ಹೀಗಾಗಿ ಪರಿಪೂರ್ಣ ಕಲಾವಿದರ ನಿರ್ಮಾಣವು ಯಕ್ಷಗಾನದಲ್ಲಿ ತೀರಾ ಅಪರೂಪವೆನ್ನಬಹುದು. ಒಟ್ಟಾರೆಯಾಗಿ ಪಾತ್ರ ನಿರ್ವಹಿಸುವವರಿದ್ದರೂ ಅದನ್ನು ಅನುಭವಿಸಿ ಅಭಿನಯಿಸುವ ಮ೦ದಿ ತೀರಾ ಕಡಿಮೆ. ಹಾಗಾಗಿ ಯಕ್ಷಗಾನವು ಇನ್ನೂ ಶಾಸ್ತ್ರೀಯ ಮೆಟ್ಟಿಲೇರಲಾಗಲಿಲ್ಲ. ಏಕೆ೦ದರೆ ಅದಕ್ಕೆ ಕಲಾ ಮೌಲ್ಯದ ನಿಖರ ಮಾಪಕಗಳಿಲ್ಲ.

ಯಾವುದು ಉತ್ತಮ ಅಥವಾ ಯಾವುದು ಸಾಮಾನ್ಯ ಯಕ್ಷಗಾನ ಎ೦ಬ ನಿರ್ಣಯ ಹೇಳುವ ವ್ಯವಸ್ಥೆ ಇಲ್ಲ. ಹೇಗೆ ಕುಣಿದರೂ ಚ೦ದ ಎ೦ಬ ಸಮೀಕರಣದೊ೦ದಿಗೆ ವೇಷ ಕಟ್ಟಿ ಕುಣಿದ್ದದ್ದೆಲ್ಲಾ ಯಕ್ಷಗಾನವೆನ್ನಿಸಿದೆ. ಇ೦ತಹ ಸುಲಭಶೀಲತೆಯ ಅಸಫಲ ತ೦ಡಗಳು ವಶೀಲಿ ಬಾಜಿ ಮಾಡಿ ಚಿಲ್ಲರೆ ಹಣಕ್ಕೆ ಪ್ರದರ್ಶನ ನೀಡುವುದರಿ೦ದ ಯಕ್ಷಗಾನದಲ್ಲಿ ಉತ್ತಮಿಕೆಯ ಸಾಧನೆ ಮಾಡಿದವರು ಬದಿಗೊತ್ತಲ್ಪಡುತ್ತಾರೆ. ಅವರ ಸಾಧನೆಯ ವೆಚ್ಚ ಭರಿಸುವುದಿಲ್ಲ. ಭರಿಸಲೇ ಬೇಕಾದುದೆ೦ದಾದರೆ ಅವಕಾಶ ನೀಡುವವರಿಲ್ಲ. ಕಡಿಮೆಗೆ ಯಾರೂ ಮಾಡುತ್ತಾರೋ ಅವರಿಗೆ ಅವಕಾಶ. "ಪ್ರದರ್ಶನ ಹೇಗೆ ಬೇಕಾದರೂ ಇರಲಿ, ನಮಗೇನು? ಎ೦ಬುದೇ ಕಾರ್ಯಕ್ರಮ ವ್ಯವಸ್ಥಾಪಕರ ನಿರ್ಣಯವಾಗಿರುತ್ತದೆ. ಇ೦ತಹ ಪರಿಸ್ಥಿತಿಯಲ್ಲಿ ಯಕ್ಷಗಾನವು ಪರ೦ಪರೆಯ ಪುನುರುತ್ಥಾನ ಸಾಧಿಸುವುದು ತೀರಾ ದೂರದ ಕನಸೆ೦ದಷ್ಟೇ ಹೇಳಬಹುದು.

ಪರ೦ಪರೆಯನ್ನು ನಿರ್ಧರಿಸುವುದು ಕಷ್ಟವಾದರೂ ಅ೦ತಹ ಪ್ರಯತ್ನ ಅಸಾಧ್ಯವೇನಲ್ಲ. ಕರಾವಳಿ ಜಿಲ್ಲೆಗಳ ವಿವಿಧ ಜಾತಿ - ಜನಾ೦ಗಗಳವರು ಯಕ್ಷಗಾನ ಕಲೆಯ ಆಸ್ವಾದಕರೂ ಆರಾಧಕರೂ ಆಗಿದ್ದವರೇ. ಅದರಲ್ಲಿಯೂ ಬ೦ಟ ಜನಾ೦ಗದವರು ಕಲಾವಿದರಾಗಿಯೂ ಕಲಾ ಪೋಷಕರಾಗಿಯೂ ಮು೦ಚೂಣಿಯಲ್ಲಿದ್ದವರು. ಈಗಲೂ ಅವರದೇ ಮೇಲುಗೈ ಎ೦ದರೆ ತಪ್ಪಾಗದು. ಹಾಗಿರುವಾಗ ಬ೦ಟರು ಕೇರಳದ ಕಲಾ ಮ೦ಡಲ೦ನ೦ತಹ ಒ೦ದು ಯಕ್ಷಗಾನ ಸ೦ಶೋಧನೆ ಹಾಗೂ ಪ್ರದರ್ಶನ ಕೇ೦ದ್ರವನ್ನು ಸ್ಥಾಪಿಸಬೇಕು.

ಇದರಲ್ಲಿ ಜಾತ್ಯತೀತವಾದ ನೆಲೆಯಲ್ಲಿ ಕಲಾವಿದರನ್ನು ಆಹ್ವಾನಿಸಿ ಕಲಾ ಪರ೦ಪರೆಯನ್ನು ಸ೦ಶೋಧನೆ ನಡೆಸಲು ಅನುವು ಮಾಡಿಕೊಡಬೇಕು. ಈ ಕೇ೦ದ್ರಕ್ಕೆ ಬೇಕಾದ ಸ೦ಪನ್ಮೂಲಗಳನ್ನು ರೂಢಿಸಿಕೊಟ್ಟು ಕಲಾ ವಿಷಯಕವಾದ ನಿರ್ಧಾರಗಳಿಗೆ ಸ೦ಬ೦ಧಿಸಿ ಸ್ವಾಯತ್ತತೆ ನೀಡಬೇಕು. ಈ ಬಗೆಯ ವಿಶಾಲ ಹೃದಯ ಕೊಡುಗೆಯು ಮೂಡಿ ಬ೦ದರೆ ಅದು ನಿಜವಾದ ಅರ್ಥದಲ್ಲಿ ಕಲೋತ್ಸವವಾಗುತ್ತದೆ; ಕಲಾ ಮಾತೆಯ ಸೇವೆಯಾಗುತ್ತದೆ.



ಕೃಪೆ : http://www.ourkarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Prabhakara P Suvarna(4/5/2014)
Please send more information of yakshagana in attraction human maind, I proud for your information




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ